ರಾಮೇಶ್ವರ
ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ರಾಮನಾಥ ಪುರಮ್ ಜಿಲ್ಲೆಗೆ ಸೇರಿದ ಒಂದು ದ್ವೀಪ ಮತು ಒಂದು ಪವಿತ್ರ ತೀರ್ಥಕ್ಷೇತ್ರ.  ಉತ್ತರ ಮತ್ತು ಪೂರ್ವಕ್ಕೆ ಬಂಗಾಲಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳ ಮಧ್ಯೆ ಇರುವ ಮನ್ನಾರ್ ಮತ್ತು ಪಾಕ್ ಖಾರಿಗಳ ನಡುವೆ ಇದೆ.  ಭಾರತ ಹಾಗೂ ಶ್ರೀಲಂಕಾ ನಡುವಿರುವ ಒಂದು ಸಣ್ಣ ದ್ವೀಪವೆಂದೂ ಹೇಳಬಹುದು.  ಉ.ಅ. 9017" ಇಂದ ಪೂ. ರೇ. 79019' ಯಲ್ಲಿರುವ ಈ ದ್ವೀಪ ಭಾರತ ಮತ್ತು ಶ್ರೀಲಂಕಾದ ನಡುವಿನ ಹವಳ ದಿಬ್ಬಗಳಲ್ಲಿ ಒಂದಾಗಿದ್ದು ಆಡಂ ಸೇತುವೆಯ ಒಂದು ಭಾಗವೂ ಆಗಿದೆ.  ಇಲ್ಲಿ ದಕ್ಷಿಣ ರೈಲ್ವೆ ಕೇಂದ್ರವಿದ್ದು ಇಲ್ಲಿಂದ ತಲೈಮನ್ನಾರ್ ಮತ್ತು ಶ್ರೀಲಂಕಾ ಮುಂತಾದೆಡೆಗಳಿಗೆ ಸಂಪರ್ಕ ಕಲ್ಪಿಸುವ, ವಸ್ತುಸಾಗಣೆಯ ಕೇಂದ್ರವೂ ಆಗಿದೆ.  ಪವಿತ್ರ ಕ್ಷೇತ್ರವೆನಿಸಿರುವ ಈ ದ್ವೀಪದಲ್ಲಿ 17 ನೆಯ ಶತಮಾನದ್ದೆಂದು ಹೇಳುವ ಶ್ರೀರಾಮನ ಹೆಜ್ಜೆ ಗುರುತುಗಳಿರುವಲ್ಲಿ ಕಟ್ಟಿದದೊಡ್ಡ ದೇವಾಲಯವಿದೆ.  ಈ ದೇವಾಲಯ ಸು. 305 ಮೀ, ಉದ್ದ198 ಮೀ ಅಗಲವಿದ್ದು 30 ಮೀ ಎತ್ತರದ ಗೋಪುರವನ್ನು ಹೊಂದಿದ್ದು ಇದು ಚತುರ್ಭುಜಾಕೃತಿಯಲ್ಲಿದೆ.  ಕಾಶಿಯಷ್ಟೇ ರಾಮೇಶ್ವರವೂ ಪ್ರಸಿದ್ಧ ಹಾಗೂ ಪವಿತ್ರ ಕ್ಷೇತ್ರವೆನಿಸಿದೆ.

ರಾಮಾಯಣದ ಪ್ರಕಾರ ಶ್ರೀರಾಮ ಲಂಕೆಗೆ ಸೇತುವೆಯನ್ನು ಕಟ್ಟಿದುದು ಈ ಸ್ಥಳದಿಂದ.  ಸೀತೆ ತನ್ನ ಪಾತಿವ್ರತ್ಯ ಪರೀಕ್ಷೆಗಾಗಿ ಅಗ್ನಿಪ್ರವೇಶ ಮಾಡಿದುದು ಈ ಸ್ಥಳದಲ್ಲೆಂದೂ ಆ ಕಾರಣದಿಂದ ಈ ಭಾಗದ ಸಮುದ್ರವನ್ನು ಅಗ್ನಿತೀರ್ಥ ಎಂದೂ ಕರೆಯಲಾಗುತ್ತದೆ.  ಸಮುದ್ರದ ಸಮೀಪದಲ್ಲೇ ದ್ರಾವಿಡ ಶಿಲ್ಪ ಕಲೆಯಿಂದ ರಾರಾಜಿಸುತ್ತಿರುವ ನೋಡಲು ಆಹ್ಲಾದಕರವಾದ ರಾಮೇಶ್ವರ ದೇವಾಲಯವಿದೆ.  ಇದರ ಎರಡು ಪಾಶ್ರ್ವಗಳಲೂ ಇರುವ ಕೆತ್ತನೆಯ ಕಂಬಗಳು ಶಿಲ್ಪಕಲಾಕೌಶಲದಿಂದ ಕೂಡಿದ್ದು ನೋಡಲು ಸುಂದರವಾಗಿದೆ.  ದೇವಾಲಯದ ಪೂರ್ವಭಾಗದಲ್ಲಿ ಹತ್ತು ಅಂತಸ್ತಿನಗೋಪುರವೂ ಪಶ್ಚಿಮದಲ್ಲಿ ಏಳು ಅಂತಸ್ತಿನ ಗೋಪುರವೂ ಇದೆ.

ಈ ದೇವಸ್ಥಾನದ ಆವರಣದಲ್ಲಿ ಒಟ್ಟು ಇಪ್ಪತ್ತನಾಲ್ಕು ತೀರ್ಥಗಳಿವೆ.   ತೀರ್ಥಗಳಲ್ಲಿ ಸ್ನಾನ ಮಾಡಿದರೆ ಸರ್ವವಿಧ ಕಷ್ಟಗಳೂ ನಿವಾರಣೆ ಆಗುತ್ತವೆ ಎಂಬ ನಂಬಿಕೆಯಿದೆ.  ದೇವಾಲಯದ ಪಶ್ಚಿಮದ್ವಾರದಿಂದ ಪ್ರವೇಶಿಸಿದರೆ ಮೊದಲು ಸಿಕ್ಕುವುದು ಮಾಧವತೀರ್ಥ.  ಇದು ಒಂದು ಚಿಕ್ಕ ಸರೋವರದಂತಿದೆ.  ಇದರ ಹತ್ತಿರದಲ್ಲಿ ಸೇತುಮಾಧವ ಮಂದಿರವಿದೆ.  ಉಳಿದ ಗವಾ, ಗವಾಕ್ಷ, ನಲ, ನೀಲ, ಗಂಧಮಾದನ, ಬ್ರಹ್ಮಹತ್ಯಾವಿಮೋಚನ, ಗಂಗಾ, ಯಮುನಾ, ಗಯಾ, ಸೂರ್ಯ, ಚಂದ್ರ, ಶಂಖ, ಚಕ್ರ, ಅಮೃತವಾಪಿ, ಶಿವ, ಸರಸ್ವತೀ, ಸಾವಿತ್ರಿ, ಗಾಯಿತ್ರಿ, ಮಹಾಲಕ್ಷ್ಮಿ, ಅಗ್ನಿ, ಅಗಸ್ತ್ಯ, ಸರ್ವ ಕೋಟಿ- ಈ ತೀರ್ಥಗಳು ಚಿಕ್ಕ ಬಾವಿಯಂತಿದ್ದು, ನೀರನ್ನು ಸೇದಿಕೊಂಡು ಸ್ನಾನ ಮಾಡಬೇಕು.  ಯಾತ್ರಿಕರು ಈ ತೀರ್ಥಗಳ ಸ್ನಾನಾನಂತರ ಪರಮೇಶ್ವರನ ದರ್ಶನಕ್ಕೆ ಹೋಗುತ್ತಾರೆ.  

ಭಾರತದಲ್ಲಿ ಪ್ರಸಿದ್ಧವಾಗಿರುವ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ರಾಮನಿಂದ ಈ ದೇವಸ್ಥಾನದಲ್ಲಿ ಪ್ರತಿಷ್ಠಿತವಾಗಿರುವ ರಾಮೇಶ್ವರ ಲಿಂಗವೂ ಒಂದು. ರಾಮ ರಾವಣನನ್ನು ಕೊಂದ ಬ್ರಹ್ಮಹತ್ಯಾದೋಪ ನಿವಾರಣೆಗಾಗಿ ಅಗಸ್ತ್ಯ ಮಹರ್ಷಿ ತಿಳಿಸಿದಂತೆ ಗಂಧಮಾದನ ಪರ್ವತದಲ್ಲಿರುವ ಈ ಕ್ಷೇತ್ರದಲ್ಲಿ ಲಿಂಗವನ್ನು ಪ್ರತಿಷ್ಠೆ ಮಾಡಲು ಉದ್ದೇಶಿಸಿ ಹನುಮಂತನಿಗೆ ಶಂಕರನಿಂದ ಲಿಂಗವನ್ನು ಕೈಲಾಸದಿಂದ ತರುವಂತೆ ತಿಳಿಸುತ್ತಾನೆ.  ಹನುಮಂತ ಲಿಂಗವನ್ನು ತರುವುದು ಸ್ವಲ್ಪ ನಿಧಾನವಾಯಿತು.  ಲಿಂಗಪ್ರತಿಷ್ಠೆ ಮುಹೂರ್ತ ಮೀರುವಂತಾಗಲು ಸೀತೆ ಮರಳಿನಿಂದ ತಯಾರಿಸಿದ ಲಿಂಗವನ್ನು ನಿರ್ದಿಷ್ಟ ಮುಹೂರ್ತದಲ್ಲಿ ರಾಮ ಪ್ರತಿಷ್ಠೆ ಮಾಡುತ್ತಾನೆ.  ಲಿಂಗ ಪ್ರತಿಷ್ಠೆ ಆದ ಮೇಲೆ ಪಾರ್ವತಿ ಪರಮೇಶ್ವರರು ಅಲ್ಲಿ ಸನ್ನಿಹಿತರಾಗಿ "ರಾಮ ನೀನು ಸ್ಥಾಪಿಸಿರುವ ಈ ಲಿಂಗವನ್ನು ಸಂದರ್ಶಿಸುವವರಿಗೆ ಅವರು ಮಾಡಿದ ಸರ್ವ ಪಾಪಗಳೂ ನಿವಾರಣೆ ಆಗುತ್ತವೆ" ಎಂದು ವರವನ್ನು ಕೊಟ್ಟರು.  ಈ ಲಿಂಗದ ಸಮೀಪದಲ್ಲಿ 3.96 ಮೀ ಎತ್ತರ, 0.81 ಮೀ ಉದ್ದ, 0.91 ಮೀ ಅಗಲವಿರುವ ಬಿಳಿಯ ಬಣ್ಣದ ನಂದಿಯನ್ನು ರಾಮ ಪ್ರತಿಷ್ಠಾಪಿಸಿದ.  ಲಿಂಗದ ಅಭಿಷೇಕಕ್ಕಾಗಿ ತನ್ನ ಧನುಸ್ಸಿನ ಪ್ರಯೋಗದಿಂದ ಒಂದು ಜಲಾಶಯವನ್ನೂ ನಿರ್ಮಿಸಿದನಂತೆ.  ಅದನ್ನೇ ಕೋಟಿತೀರ್ಥ ಎಂದು ಕರೆಯುತ್ತಾರೆ.  ಈಗಲೂ ಈ ಕೋಟಿತೀರ್ಥದ ಜಲದಿಂದಲೇ ಶುದ್ಧಸ್ಫಟಿಕ ರಾಮೇಶ್ವರ ಲಿಂಗಕ್ಕೆ ಅಭಿಷೇಕ ಮಾಡುತ್ತಾರೆ.

ರಾಮೇಶ್ವರ ಲಿಂಗ ಪ್ರತಿಷ್ಠೆಯಾದ ಬಳಿಕ ಬಂದ ಹನುಮಂತ ತಾನು ಬರುವುದಕ್ಕೆ ಮೊದಲೇ ರಾಮ ಲಿಂಗವನ್ನು ಪ್ರತಿಷ್ಠೆ ಮಾಡಿರುವುದನ್ನು ನೋಡಿ ವಿಷಾದಿಸಿದನಂತೆ.  ಆಗ ರಾಮ ಲಿಂಗವನ್ನು ಪ್ರತಿಷ್ಠೆ ಮಾಡಿದ ಸಮೀಪದಲ್ಲೇ ಹನುಮಂತ ತಂದ ವಿಶ್ವನಾಥ ಲಿಂಗವನ್ನು ಸ್ಥಾಪಿಸಿದನಂತೆ.  ಇಂದಿಗೂ ಯಾತ್ರಿಕರು ಈ ಲಿಂಗದರ್ಶನ ಮಾಡಿದ ಬಳಿಕವೇ ರಾಮಲಿಂಗ ದರ್ಶನ ಮಾಡುವುದು, ಯಾತ್ರಿಕರು ಗಂಗಾನದಿಯಿಂದ ನೀರನ್ನು ತಂದು ರಾಮಲಿಂಗಕ್ಕೆ ಅಭಿಷೇಕ ಮಾಡಿಸುವುದಲ್ಲದೇ ಈ ಕ್ಷೇತ್ರದಿಂದ ಮರಳನ್ನು ತೆಗೆದುಕೊಂಡುಹೋಗಿ ಗಂಗಾನದಿಯಲ್ಲಿ ಸೇರಿಸುವುದರಿಂದ ತಮ್ಮ ಯಾತ್ರೆ ಸಫಲವಾಗುವುವೆಂದು ನಂಬುತ್ತಾರೆ.

ರಾಮಲಿಂಗದ ಮೇಲೆ ಛತ್ರಿಯಂತಿರುವ ಆದಿಶೇಷನ ಹೆಡೆಯಿದೆ.  ನಂದೀಶ್ವರನ ಎದುರಿನಲ್ಲಿ ಅರಬ್ಬಿಸಮುದ್ರ ಮತ್ತು ಬಂಗಾಲ ಸಾಗರಗಳ ಶಿಲಾಮೂರ್ತಿಗಳಿವೆ.  ಎಡಪಾಶ್ರ್ವದ ಮಂಟಪದಲ್ಲಿ ಹನುಮಂತನ ಮೂರ್ತಿ ಇದೆ.  ಇದರ ಸಮೀಪದಲ್ಲಿ ಶಿವತೀರ್ಥವೂ ಪೂರ್ವ ಮತ್ತು ಉತ್ತರದಲ್ಲಿ ಗಂಗಾ ಮತ್ತು ಯಮುನಾ ತೀರ್ಥಗಳೂ ಇವೆ.  ರಾಮೇಶ್ವರ ಮಂದಿರದ ಸಮೀಪದಲ್ಲೇ ಗಂಧಮಾದನೇಶ್ವರ ಮತ್ತು  ಅಗಸ್ತ್ಯೇಶ್ವರ ಲಿಂಗಗಳಿವೆ.  ಅಗಸ್ತ್ಯ ಮಹರ್ಷಿಗಳು ಈ ಗಂಧಮಾದನೇಶ್ವರ  ಲಿಂಗವನ್ನು ರಾಮ ಪ್ರತಿಷ್ಠೆ ಮಾಡಿದ ಲಿಂಗಕ್ಕಿಂತ ಮೊದಲು ಪ್ರತಿಷ್ಠೆ ಮಾಡಿದ್ದರು.  ಮತ್ತೊಂದು ಸ್ವಯಂ ಉದ್ಭವಲಿಂಗ, ಅಗಸ್ತ್ಯರು ಇದನ್ನು ಪೂಜಿಸುತ್ತಿದ್ದುದರಿಂದ ಇದಕ್ಕೆ ಅಗಸ್ತ್ಯೇಶ್ವರ ಎಂಬ ಹೆಸರು ಬಂದಿದೆ.

ಈ ಮಂದಿರದ ದಕ್ಷಿಣ ಪಾಶ್ರ್ವದಲ್ಲಿ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿರುವ ಚಿಕ್ಕದಾದ ಗುಡಿ ಇದೆ.  ಹಾಗೆಯೇ ಪರ್ವತವರ್ಧಿನಿ ಎಂಬ ಪಾರ್ವತಿ ಗುಡಿಯೂ ಇದೆ. ಇದರಲ್ಲೇ ಸಂತಾನ ಗಣಪತಿಯ ವಿಗ್ರಹವೂ ಇದೆ.

ರಾಮ ಮಂದಿರದ ಬಲಗಡೆ ವಿಶಾಲಾಕ್ಷಿ ಮಂದಿರ ಮತ್ತು ಕೋಟಿತೀರ್ಥವಿದೆ.  ರಾಮೇಶ್ವರ ಮಂದಿರದ ಪ್ರಾಕಾರದಲ್ಲಿ ನವಗ್ರಹ, ದಕ್ಷಿಣಾಮೂರ್ತಿ, ಚಂದ್ರಶೇಖರ, ಏಕಾದಶರುದ್ರರು, ಶೇಷಶಾಯಿ, ಕಲ್ಯಾಣ ಸುಂದರೇಶ್ವರ, ನಟರಾಜ, ಹನುಮಂತ, ಕಾಲಭೈರವ, ಮಹಾಲಕ್ಷ್ಮೀ, ದುರ್ಗಾ ಮೊದಲಾದ ದೇವತೆಗಳ ವಿಗ್ರಹಗಳೂ ಇವೆ.

ಈ ಮಂದಿರಕ್ಕೆ ಸುಮಾರು 2.5 ಕಿ.ಮೀ. ದೂರದಲ್ಲಿರುವ ಬೆಟ್ಟವೇ ಗಂಧಮಾದನ ಪರ್ವತ. ಇಲ್ಲಿಗೆ ಹೋಗುವ ಕಾಲುದಾರಿಯಲ್ಲಿ ಸುಗ್ರೀವ, ಅಂಗದ, ಜಾಂಬವ ಮತ್ತು ಅಮೃತ ಎಂಬ ನಾಲ್ಕು ತೀರ್ಥಗಳಿವೆ. ಇಲ್ಲಿರುವ ಹನುಮಂತನ ಮಂದಿರದಲ್ಲಿ ಶ್ರೀರಾಮನ ಪಾದುಕೆಗಳಿವೆ.  ಬೆಟ್ಟದ ಮೇಲಿನಿಂದ ನೋಡಿದರೆ ರಾಮೇಶ್ವರನಗರ ಮನೋಹರವಾಗಿ ಕಾಣುತ್ತದೆ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ